ದಿ || ಶ್ರೀ ಜೆ. ಟಿ. ಸುಂದರೇಶ್

ಮೊನ್ನೆ Feb 13, 2024 ರಂದು ನಮ್ಮ ಮೆಚ್ಚಿನ ಪ್ರಾಂಶುಪಾಲರಾಗಿದ್ದ ಶ್ರೀ ಜೆ ಟಿ ಸುಂದರೇಶ್ ಸರ್ ದೈವಾಧೀನರಾದರೆಂಬ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು! ನಿಜಕ್ಕೂ ಇದು ನಂಬಲಸಾಧ್ಯ! ಈಗಲೂ ಪ್ರಿನ್ಸಿ ಸರ್ ನಮ್ಮಲ್ಲೇ ಇದ್ದಾರೆ. ಈ ಹಿಂದೆ 2019 ರಲ್ಲಿ ಗುರುವಂದನಾ ಕಾರ್ಯಕ್ರಮದ ಸಮಯದಲ್ಲಿ ಬರೆದಿದ್ದ ಬರಹವೊಂದನ್ನು ಹಂಚಿಕೊಳ್ಳುತ್ತಿದ್ದೇನೆ

ಗೆಳೆಯರೇ,
ಬಹಳದಿನಗಳಿಂದ ಕಾತುರದಿಂದ ಕಾದಿದ್ದ ಸಮ್ಮಿಲನ(2-6-2019 ಭಾನುವಾರ) ವೈಭವ ಸಡಗರಗಳಿಂದ ನೆರವೇರಿತು. ದೂರದೂರುಗಳಿಂದ ಅನೇಕರು ಬಂದು ಈ ವೈಭವಯುತವಾದ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು. ಅನೇಕರಿಗೆ ಬಾಗಿಯಾಗಲು ಸಾಧ್ಯವಾಗಲಿಲ್ಲವಾದರೂ ಅವರ ಹಾರೈಕೆ, ನಮ್ಮೊಂದಿಗಿತ್ತು ಹಾಗಾಗಿ ಈ ಸಂಭ್ರಮ ಮುಗಿಲು ಮುಟ್ಟಲು ಕಾರಣವಾಗಿತ್ತು.
ಕಾರ್ಯಕ್ರಮವು ನಿವೃತ್ತ ಪ್ರಾಂಶುಪಾಲ ಶ್ರೀ ಸುಂದರೇಶ್ ಅವರನ್ನು ವಿಶಿಷ್ಟವಾದ ಮೆರವಣಿಗೆಯ ಮೂಲಕ ಅವರನ್ನು ಸಭಾಂಗಣಕ್ಕೆ ಕರೆದುಕೊಂಡು ಬಂದ ರೀತಿಯೇ ವಿಶಿಷ್ಟ ಹಾಗೂ ಸಂಭ್ರಮದಿಂದ ಕೂಡಿತ್ತು.
ಗುರು ವಂದನೆ ಕಾರ್ಯಕ್ರಮ ಅರ್ಥಪೂರ್ಣ ವಾಗಿತ್ತು.
ಬದಲಾದ ಕಾಲಘಟ್ಟದಲ್ಲಿ ವಿದ್ಯೆ ಕಲಿಸಿದ ಗುರುಗಳ ಬಗ್ಗೆ ಇಷ್ಟೊಂದು ಭಕ್ತಿ, ಪ್ರೀತಿ ವ್ಯಕ್ತಪಡಿಸುವ ಮನಸ್ಥಿತಿ ನಮ್ಮೆಲ್ಲರಿಗಿರುವುದು ಕಲಿಸಿದ ಗುರುಗಳ ಸಾರ್ಥಕ ಬದುಕಿನ ಕನ್ನಡಿಯಾಗಿದೆ.
ಇನ್ನು SPT ಹಳೇ ವಿದ್ಯಾರ್ಥಿ ಸಂಘ ಇಷ್ಟೊಂದು ಕ್ರಿಯಾಶೀಲವಾಗಿರುವ ಮೂಲ ಕಾರಣವೇ ಶ್ರೀ ಸುಂದರೇಶ್ ಮತ್ತು ಕೆ ಕೃಷ್ಣಪ್ರಸಾದ್ ಎಂದರೆ ತಪ್ಪಾಗಲಾರದು. ಅವರಿಗಿದ್ದ ಹೃದಯವೈಶಾಲ್ಯ, ಪ್ರೀತಿ ಮತ್ತು
ಚತುರತೆ ಇಂದು ಹಳೇ ವಿದ್ಯಾರ್ಥಿ ಸಂಘ ಹೆಮ್ಮರವಾಗಿ ಬೆಳೆದು ನಿಂತದ್ದೇ ಸಾಕ್ಷಿ.
ಗುರುವಂದನೆ ಯ ಪ್ರಮುಖ ಆಕರ್ಷಣೆಯಾಗಿ ಸಂಡೇ ವಿತ್ ಸುಂದರೇಶ್ ಕಾರ್ಯಕ್ರಮ ಅತ್ಯುತ್ತಮ ವಾಗಿ ಮೂಡಿಬಂದಿತು. ಗೆಳೆಯರಾದ ಅರುಣ್ ಮತ್ತು ವಿಜಿಶೆಟ್ಟಿ, ಪರಮ ಗುರುವಿನ ಸಾರ್ಥಕ ಜೀವನದ ಪ್ರಮುಖ ಘಟ್ಟಗಳನ್ನು ಅನಾವರಣ ಗೊಳಿಸುವಲ್ಲಿ ಯಶಸ್ವಿಯಾದರು. ಶ್ರೀ ಸುಂದರೇಶ್ ಅವರ ಸರಳ ಜೀವನ ಶಿಸ್ತು, ಪ್ರಾಮಾಣಿಕತೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟ ಪರಿ ನಿಜಕ್ಕೂ ವಿನೂತನ ವಾಗಿತ್ತು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿರೆಲ್ಲರೂ ಇದನ್ನು ಅಭಿನಂದಿಸಿದ್ದು ಇದರ ಯಶಸ್ಸಿಗೆ ಸಾಕ್ಷಿಯಾಯಿತು.
ಈ ಕಾರ್ಯಕ್ರಮದ ಒಂದು ಪ್ರಮುಖ ಭಾಗದಲ್ಲಿ ಶ್ರೀ ಸುಂದರೇಶ್ ಹೇಳಿದ ಮಾತು ಅವರ ಮೇರು ವ್ಯಕ್ತಿತ್ವವನ್ನು ಅನಾವರಣ ಗೊಳಿಸುತ್ತದೆ. “ನನ್ನ ಸಾಧನೆಗಿಂತ ನನ್ನ ಶಿಷ್ಯರ ಸಾಧನೆ ಅಮೋಘ!” ಎನ್ನುವ ಅವರ ಮಾತು ಅವರ ಹೃದಯವೈಶಾಲ್ಯ ನಿರೂಪಿಸುತ್ತದೆ. ಇದು ನಿಜಕ್ಕೂ ಗುರುವಿನ ನಿಸ್ವಾರ್ಥ ಬದುಕಿನ ಗುರಿ! ಎಲ್ಲ ಶಿಷ್ಯರ ಸಾಧನೆ ಗೆ ಅವರೇ ಮೂಲ ಪ್ರೇರಣೆ ಹಾಗಾಗಿ ಇದು ನಿಜವಾದ ಗುರುವಿನ ಸಾಧನೆ!
ದಿ||ಕೆ ಕೃಷ್ಣಪ್ರಸಾದ್ ಅವರ ಪುಣ್ಯ ಸ್ಮರಣೆ ಸಮಯದಲ್ಲಿ ಶ್ರೀಮತಿ ಕೃಷ್ಣಪ್ರಸಾದ್ ರು ಗುರುಶಿಷ್ಯ ಸಂಬಂಧ ದ ಮಾತನಾಡುವಾಗ ನಿಜಕ್ಕೂ ಸಭಾಂಗಣ ಭಾವುಕ ಕ್ಷಣವಾಗಿತ್ತು. ಅವರ ಕುಟುಂಬದ ಸದಸ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಸಮಾರಂಭ ಕ್ಕೊಂದು ಅರ್ಥ ತಂದುಕೊಟ್ಟಿತು.
ಚಂದನಾ, ವಿಜೇತಾ ಮತ್ತು ವಿಜಿಶೆಟ್ಟಿ ಸುಶ್ರಾವ್ಯ ವಾಗಿ ಹಾಡಿ ರಂಜಿಸಿದರೆ, ಚೇತನ್ ಮತ್ತಿತರ ನೃತ್ಯ, ಗಿರೀಶ್ ಹಂದೆ ಮತ್ತು ವಿಕ್ಕಿ ಸಂಗಡಿಗರ ಕಿರುಪ್ರಹಸನ ದಿಂದ ಪ್ರೇಕ್ಷಕರನ್ನು ರಂಜಿಸಿದರು.
ಅನೇಕ ಹಳೆ ವಿದ್ಯಾರ್ಥಿ ಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ದೇಶ ವಿದೇಶಗಳಲ್ಲಿರುವ ಹಳೆ ವಿದ್ಯಾರ್ಥಿ ಗಳು ವೀಡಿಯೋ ಮೂಲಕ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದ್ದರು.
ಮದ್ಯಾನಃ ರುಚಿಕಟ್ಟಾದ ಭೋಜನದ, ಸಂಜೆ ಟೀ-ಕಾಫಿ ಸ್ನಾಕ್ಸ್ಸ್ ವ್ಯವಸ್ಥೆ ಇತ್ತು.
ಒಟ್ಟಿನಲ್ಲಿ ಅತ್ಯಂತ ಸಮಯೋಚಿತ, ಹಾಗೂ ವ್ಯವಸ್ಥಿತ ಕಾರ್ಯಕ್ರಮ ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರ ಸಾಕ್ಷಿಯಾಯಿತು. ಪ್ರೋಗ್ರಾಂ ಮುಗಿದಮೇಲೂ ಸಭಾಂಗಣದಿಂದ ಹೊರಡುವುದು ಎಲ್ಲರಿಗೂ ಕಷ್ಟವಾಗಿತ್ತು.
ಸಮಾರಂಭ ಯಶಸ್ಸಿಗೆ ನೀವು, ನಿಮ್ಮಹಾರೈಕೆ ಸಹಕಾರ ವಲ್ಲದೇ ಶ್ರೀ ಸುಂದರೇಶ್ ಅವರ ಕುಟುಂಬ, ಸ್ನೇಹಿತರು, ಹಾಗೂ ಶ್ರೀ ಕೃಷ್ಣಪ್ರಸಾದ್ ಕುಟುಂಬ ಸ್ನೇಹಿತರು ಎಲ್ಲಾ ಹಳೆಯ ವಿದ್ಯಾರ್ಥಿಗಳ ಸಹಕಾರವನ್ನು SPTಹಳೇ ವಿದ್ಯಾರ್ಥಿಗಳ ಸಂಘ ಪ್ರಶಂಸಿಸುತ್ತದೆ.

ಸಂಗೀತ ಲೋಕದ ದಿಗ್ಗಜರ ವ್ಯಂಗ್ಯ ಭಾವಚಿತ್ರ ಪ್ರದರ್ಶನ

ನಿನ್ನೆ ಇಂಡಿಯನ್ ಇನ್ಸ್ಟಿಟ್ಯೂಟ್ ಆ ವರ್ಲ್ಡ್ ಕಲ್ಚರ್ ಆರ್ಟ್ ಗ್ಯಾಲರಿ ಮತ್ತು ವಾಡಿಯಾ ಸಭಾಂಗಣದಲ್ಲೊಂದು ಹೊಸ ಲೋಕವೇ ಸೃಷ್ಟಿ ಯಾಗಿತ್ತು, ಈ ಸೊಬಗಿಗೆ ನಾವು ಸಾಕ್ಷಿಯಾಗುವ ಸೌಭಾಗ್ಯ ನಮಗೆ ದೊರಕಿದ್ದು ನಮ್ಮ ಪುಣ್ಯ. ನಾಡಿನ ಪ್ರಖ್ಯಾತ ಕಲಾವಿದರಾದ ನಂಜುಂಡ ಸ್ವಾಮಿ ಯವರು ರಚಿಸಿದ ಸಂಗೀತ ಲೋಕದ ದಿಗ್ಗಜರ ಸುಮಾರು 70 ಕಲಾವಿದರ ವ್ಯಂಗ್ಯ ಭಾವಚಿತ್ರ ಪ್ರದರ್ಶನ ಅದ್ದೂರಿಯಿಂದ ಉದ್ಘಾಟನೆ ಗೊಂಡಿತು. ನಂತರ ವಿದ್ವಾನ್ ಶ್ರೀ ಆನೂರು ಅನಂತ ಕೃಷ್ಣಶರ್ಮ ಮತ್ತು ಸುರಮಣಿ ಪ್ರವೀಣ್ ಗೊಡ್ಕಿಂಡಿ ಮತ್ತು ಕಿರಣ್ ಗೊಡ್ಕಿಂಡಿ ಅವರ ಸಂಗೀತ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸಿತು.

ನಂಜುಂಡ ಸ್ವಾಮಿಗಳು ಮೂಲತ ಸಂಗೀತ ಹಿನ್ನಲೆಯುಳ್ಳ ಕುಟುಂಬದಿಂದ ಬಂದವರು. ಹಾಗಾಗಿ ಅವರು ರಚಿಸಿದ ಎಲ್ಲ ಕ್ಯಾರಿಕೇಚರ್ ಗಳೂ ಪರಿಪೂರ್ಣತೆ ಪಡೆದಿವೆ ಎಂದರೆ ತಪ್ಪಾಗಲಾರದು. ಸಂಗೀತ ಗಾರರ ಹಾವ ಭಾವ ಗಳನ್ನೆಲ್ಲ ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಸ್ವಾಮಿಗಳು ತಮ್ಮ ಕೈಚಳಕ ತೋರಿದ್ದಾರೆ. ಸಂಗೀತ ಕಲಾವಿದ ಹಾವ ಭಾವ ಗಳಿಂದ ನಮ್ಮನ್ನು ಹಠಾತ್ತನೆ ಗಂಧರ್ವ ಲೋಕಕ್ಕೆ ಸೆಳೆಯುವಾಗ ಅಲ್ಲೆಲ್ಲೋ ಅವರ ಸೀರೆಯ ಸೆರಗಿನ ಜರಿ ಹೊಳೆಯುವುದು.. ಶಲ್ಯದ ಚಿತ್ತಾರ ನಮ್ಮನ್ನು ಸೆಳೆಯುವುದು.. ಅವರು ನುಡಿಸುವ ವಾದ್ಯಗಳ ಕುಸುರಿ.. ಹೀಗೆ ಅತೀ ಸೂಕ್ಷ್ಮಾತಿ ಸೂಕ್ಷ್ಮ ವಿಸ್ಮಯಗಳನ್ನು ಸೆರೆಹಿಡಿದಿದ್ದಾರೆ.

ಆತುರದಲ್ಲಿ ಪ್ರಸಿದ್ದಿಗೆ ಬರಬೇಕೆನ್ನುವ ಈ “ವೈರಲ್” ಎನ್ನುವ ಕಾಲದಲ್ಲಿ.. ಯಾವುದೊ ಹೆಸರಾಂತ ಫಿಲಂ ಸ್ಟಾರ್ ನನ್ನೋ ಅಥವಾ ಪೊಲಿಟಿಷಿಯನ್ ನನ್ನೋ ಚಿತ್ರಿಸಿ ಪ್ರಸಿದ್ದಿ ಗಳಿಸಬಹುದಾಗಿದ್ದ ಸ್ವಾಮಿಗಳು, ಸಂಗೀತ ಲೋಕದ ಮಹಾನ್ ವ್ಯಕ್ತಿಗಳನ್ನು ತಮ್ಮ ಚಿತ್ರ ವಿಷಯವನ್ನಾಗಿಸಿ ಕೊಂಡು ಅತೀ ಅದ್ಭುತವಾಗಿ ಚಿತ್ರಿಸಿದ್ದು ಕಲಾಲೋಕಕ್ಕೆ ಅವರ ಮಹಾನ್ ಕೊಡುಗೆ ಎಂದರೆ ತಪ್ಪಾಗಲಿಕ್ಕಿಲ್ಲ.

ಅವರ ಮುಂದಿನ ಎಲ್ಲ ಯೋಜನೆಗಳೂ ಯಶಸ್ವಿಯಾಗಲಿ.

ಕಲಾಸಕ್ತರು, ವಿದ್ಯಾರ್ಥಿಗಳು, ಸಂಗೀತಪ್ರೇಮಿಗಳು ನೋಡಲೇ ಬೇಕಾದ ಈ ಪ್ರದರ್ಶನ ಜುಲೈ 10 ರವರೆಗೂ ಸಾರ್ವಜನಿಕರ ವೀಕ್ಷಣೆಗೆ ಬೆಳಿಗ್ಗೆ 10 ರಿಂದ ಸಂಜೆ 7 ರ ವರೆಗೆ ಲಭ್ಯವಿರುತ್ತದೆ.

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆ ವರ್ಲ್ಡ್ ಕಲ್ಚರ್, ಆರ್ಟ್ ಗ್ಯಾಲರಿ

ಬಸವನಗುಡಿ ಬೆಂಗಳೂರು

ನೀವು ಭೇಟಿ ಮಾಡಿದಾಗ ಹಾಗೆಯೆ ಕಲಾವಿದ ನಂಜುಂಡ ಸ್ವಾಮಿಗಳನ್ನು ಮಾತನಾಡಿಸುವುದನ್ನು ಮರೆಯಬೇಡಿ. ಅವರು ಒಳ್ಳೆಯ ಹಾಸ್ಯಪ್ರಜ್ಞೆ ಇರುವ ಮಾತುಗಾರರೂ ಕೂಡ.

ಚಿತ್ರಕೃಪೆ: ವೆಂಕಿ ಸರ್ & ನಂಜುಂಡಸ್ವಾಮಿ

ಗಜವದನಾ ಹೇರಂಬಾ!

ಗಜವದನಾ ಹೇರಂಬಾ

ವಿಜಯಧ್ವಜ ಶತರಧಿ ಪ್ರತಿಭಾ

ಏಕದಂತ ವೈಕಲ್ಯಾಂತ…

ವೃಧ್ದಿ ಸಿಧ್ದಿದ್ವಯರಾಕಾಂತ

ಗಜವದನಾ ಹೇ ರಂಬಾ….

ಈಹಾಡು ಕೇಳಿದಾಗಲೆಲ್ಲಾ ನನಗೆ ಊರಿನದೇ ನೆನಪಾಗುತ್ತದೆ. ಈ ಹಾಡು ನಮ್ಮೂರ ಹತ್ತಿರದ ಹೇರಂಬಾಪುರದ ಸ್ವಂತ ಹಾಡು ಎಂದೇ ಬಹುಕಾಲ ಅಂದುಕೊಂಡಿದ್ದೆ!ಹೇರಂಬಾಪುರ ನಮ್ಮೂರಿನಿಂದ ಎರಡೇ ಕಿಲೋಮೀಟರ್ ದೂರ ವಿರುವ ಊರು. ಆದರೆ ಸರಿಯಾಗಿ ನೋಡಿದರೆ ನಮ್ಮನೆಯ ಸಿಮೆಂಟು ಕಟ್ಟೆಯ ಮೇಲೆ ಕಾಫಿ ಕುಡಿಯುತ್ತಾ ಕುಳಿತು, ಬಲಕ್ಕೆ ನೇರವಾಗಿ ನೊಡಿದರೆ ಕಾಣುವ ಸ್ವರ್ಗದಂತ ಊರು. ನಮ್ಮನೆ ಕಟ್ಟೆಯಿಂದ ಹೇರಂಬಾಪುರ ಮತ್ತು ನರ್ಜಿ ಗುಡ್ಡಗಳು ಸೊಗಸಾಗಿ ಕಾಣುತ್ತದೆ.

ಅಲ್ಲಿನ ತೋಟದ ಮದ್ಯದಲ್ಲಿನ ಜಲದುರ್ಗಾಂಬ ದೇವಸ್ಥಾನ ವನ್ನು ಸುತ್ತಲೂ ಆವರಿಸಿರುವ ನೀರು! ಪ್ರಕೃತಿ ಸೌಂದರ್ಯದ ಹೇರಂಬಾಪುರ ಎಷ್ಟು ಚೆಂದವೋ ಅದಕ್ಕಿಂತ ಅಲ್ಲಿನ ಜನರೆಲ್ಲರೂ ನನಗೆ ವಿಶೇಷ ವ್ಯಕ್ತಿಗಳು.ನೋಡುವುದಕ್ಕೆ ಸಾದಾರಣ ವ್ಯಕ್ತಿ ಗಳಂತೆ ಕಂಡರೂ ಅವರಲ್ಲಿನ ಬುದ್ದಿವಂತಿಕೆಯೇ ವಿಶೇಷ.

ಈ ಹಾಡಿಗೂ ಹೇರಂಬಾಪುರ ಕ್ಕೂ ಸಂಬಂಧ ಏನು ಅಂತ?!

ನಾವೆಲ್ಲ ಚಿಕ್ಕವರಿದ್ದಾಗ, ಹೇರಂಬಾಪುರ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಸ್ಥಾನ! ಜಲದುರ್ಗಾಂಬ ಯುವಕ ಸಂಘದವರು ಹೇರಂಬಾಪುರದಲ್ಲಿ ರಾಜ್ಯ ಮಟ್ಟದ ನಾಟಕೋತ್ಸವ ಗಳನ್ನು ನಡೆಸುತ್ತಿದ್ದರು. ನಾವೆಲ್ಲ ನೀನಾಸಂ ಹೆಸರು ಕೇಳಿದ್ದೇ ಆಗ!. ರಾಜ್ಯದ ಮೂಲೆ ಮೂಲೆಗಳಿಂದ ಹವ್ಯಾಸಿ, ಕಂಪೆನಿ ನಾಟಕ ತಂಡಗಳು 15-20 ದಿನಗಳು ನಿರಂತರವಾಗಿ ಪ್ರದರ್ಶನ ನೀಡುತ್ತಿದ್ದವು.ಗಮನಿಸಿ ಆಗ ಇಷ್ಟೊಂದು ಅನುಕೂಲತೆಗಳಿರಲಿಲ್ಲ. ಹೆಚ್ಚೇನು, ಹೇರಂಬಾಪುರಕ್ಕೊಂದು ಟಾರ್ ರಸ್ತೆಯೇ ಇರಲಿಲ್ಲ. ಮಣ್ಣು ರಸ್ತೆ ಇದ್ದದ್ದು ಜಲ್ಲಿ ರಸ್ತೆ ಯಾಯಿತು. ಸಂಪರ್ಕಸಾಧನಗಳಂತೂ ಇರಲಿಲ್ಲ. ಆದರೆ ಅಲ್ಲಿನ ಯುವಕಸಂಘದವರಿಗೆ ಸಾಂಸ್ಕೃತಿಕ ಹಿನ್ನಲೆಯಿತ್ತು ಹಾಗೂ ಸ್ಪಷ್ಟ ನಿಲುವಿತ್ತು. ಹಾಗಾಗಿ ಅದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯಕ್ರಮ ಗಳನ್ನು ಸರಾಗವಾಗಿ ನಡೆಸುತ್ತಾ ಬಂದಿದ್ದರು.ನಾನಂತೂ ಆಗ ಮಿಡಲ್ ಸ್ಕೂಲ್ ಓದುತ್ತಿದ್ದೆ ಅನ್ನಿಸುತ್ತೆ. ನಾವು ರಾತ್ರಿ ನಾಟಕ ನೋಡುವುದಕ್ಕೆ ಮನೆಮಂದಿಯಲ್ಲ ನಡೆದುಕೊಂಡು ಹೋಗಿ ನಾಟಕ ನೋಡಿ ಮಧ್ಯರಾತ್ರಿ ವಾಪಾಸು ಬರುತ್ತಿದ್ದೆವು. ಯಾವ ನಾಟಕವನ್ನೂ ಮಿಸ್ ಮಾಡುತ್ತಿರಲಿಲ್ಲ!ಆಗ ನೋಡಿದ ನಾಟಕಗಳಲ್ಲಿ ಕೇಳಿದ ಈ ಗೀತೆ, ಹೇರಂಬಾಪುರ ದ ಸ್ವಂತ ಗೀತೆ ಎನ್ನುವ ಭಾವ ನನಗೀಗಲೂ ಇದೆ.

ಈಗಲೂ ಹೇರಂಬಾಪುರ ಅಷ್ಟೇ ಚಂದದ ಊರು, ಹೆಚ್ಚೆಂದರೆ ನಾವು ನಾಟಕ ನೋಡುತ್ತಿದ್ದ ಜಾಗದಲ್ಲಿ ರಬ್ಬರ್ ಕಾಡು ಆಗಿದೆ ಓಡಾಡುವುದಕ್ಕೆ ಟಾರ್ ರಸ್ತೆಯೇ ಇದೆ, ನಾನು ಆ ರಸ್ತೆಯಲ್ಲಿ ಓಡಾಡುವಾಗೆಲ್ಲ ಕೇಳಲು ಬಯಸುತ್ತೇನೆ…ಗಜವದನಾ ಹೇರಂಬ…..#ಹೇರಂಬಾಪುರ#ನೆನಪು

ಹರೀಶ ಹಾಗಲವಾಡಿಯವರ “ಋಷ್ಯಶೃಂಗ”

ನಾನೇನೂ ಸಿಕಾಪಟ್ಟೆ ಪುಸ್ತಕ ಓದುವ ಹುಳುವಂತೂ ಅಲ್ಲ.ಹಾಗೆಯೇ ಪುಸ್ತಕ ವೆಂದರೆ ಅಲರ್ಜಿಯಂತೂ ಇಲ್ಲ! ಛಂದ ಪುಸ್ತಕ ಪ್ರಕಟಿಸಿದ ಹರೀಶ ಹಾಗಲವಾಡಿಯವರ “ಋಷ್ಯಶೃಂಗ” ಓದುವುದಕ್ಕೆ ಕುಳಿತಮೇಲೆ ಅಂವ ಬಿಡಲಿಲ್ಲ. ಸುಮ್ಮನೆ ಓದಿಸಿಕೊಂಡು ಹೋಗುತ್ತಾ ಇರ್ತಾನೆ!

ಹಾ…ನೀವೇನೂ ಓದಬೇಕಿಲ್ಲ….ಋಷ್ಯಶೃಂಗ ಹೇಳುತ್ತಾ ಹೋಗುತ್ತಾನೆ ನಾವು ಸುಮ್ಮನೆ ಕೇಳಿದರೆ ಸಾಕು! ಹರೀಶ ಹಾಗಲವಾಡಿಯವರದ್ದು ಎಷ್ಟು ಚೆಂದದ ಬರಹ ವೆಂದರೆ ಅವರ ಮೊದಲ ಕಾದಂಬರಿ “ನ್ಯಾಸ” ವನ್ನೂ ಓದಲೇ ಬೇಕೆಂಬ ಉತ್ಕಟತೆ ನಿಮ್ಮನ್ನು ಕಾಡುತ್ತದೆ.

ಸಾಮಾನ್ಯವಾಗಿ ಇನ್ಸ್ಟಾಲ್ಮೆಂಟ್ಗಳಲ್ಲೇ ಓದುವ ನಮ್ಮನ್ನು ಋಷ್ಯಶೃಂಗ ಒಂದೇ ಗುಕ್ಕಿನಲ್ಲಿ ಓದಿಸುತ್ತಾನೆ. ಸಮಾನಮನಸ್ಕ ಗೆಳೆಯರೇ ನೀವು ಓದಲೇಬೇಕೆಂಬ ಅಭಿಲಾಷೆ ನನ್ನದು.

ಅಪಾರ ಅವರ ಸುಂದರ ವಿನ್ಯಾಸದ ಪುಸ್ತಕ ನಿಮ್ಮ ಮನೆ ಹಾಗೂ ಮನಃ ದಲ್ಲಿದ್ದರೆ ನಂಗಂತೂ ಸಂತೋಷ. ಛಂದ ಪುಸ್ತಕ ದ ಮೂಲಕ ಚೆಂದದ ಪುಸ್ತಕ ಪ್ರಕಟಿಸುತ್ತಿರುವ ವಸುಧೇಂದ್ರರೂ ಅಭಿನಂಧನಾರ್ಹರು.

ನಿಮ್ಮ ಪ್ರತಿಗಾಗಿ 9945939436 ಗೆ ವಾಟ್ಸಾಪ್ ಮಾಡಿ.