ಸಂಗೀತ ಲೋಕದ ದಿಗ್ಗಜರ ವ್ಯಂಗ್ಯ ಭಾವಚಿತ್ರ ಪ್ರದರ್ಶನ

ನಿನ್ನೆ ಇಂಡಿಯನ್ ಇನ್ಸ್ಟಿಟ್ಯೂಟ್ ಆ ವರ್ಲ್ಡ್ ಕಲ್ಚರ್ ಆರ್ಟ್ ಗ್ಯಾಲರಿ ಮತ್ತು ವಾಡಿಯಾ ಸಭಾಂಗಣದಲ್ಲೊಂದು ಹೊಸ ಲೋಕವೇ ಸೃಷ್ಟಿ ಯಾಗಿತ್ತು, ಈ ಸೊಬಗಿಗೆ ನಾವು ಸಾಕ್ಷಿಯಾಗುವ ಸೌಭಾಗ್ಯ ನಮಗೆ ದೊರಕಿದ್ದು ನಮ್ಮ ಪುಣ್ಯ. ನಾಡಿನ ಪ್ರಖ್ಯಾತ ಕಲಾವಿದರಾದ ನಂಜುಂಡ ಸ್ವಾಮಿ ಯವರು ರಚಿಸಿದ ಸಂಗೀತ ಲೋಕದ ದಿಗ್ಗಜರ ಸುಮಾರು 70 ಕಲಾವಿದರ ವ್ಯಂಗ್ಯ ಭಾವಚಿತ್ರ ಪ್ರದರ್ಶನ ಅದ್ದೂರಿಯಿಂದ ಉದ್ಘಾಟನೆ ಗೊಂಡಿತು. ನಂತರ ವಿದ್ವಾನ್ ಶ್ರೀ ಆನೂರು ಅನಂತ ಕೃಷ್ಣಶರ್ಮ ಮತ್ತು ಸುರಮಣಿ ಪ್ರವೀಣ್ ಗೊಡ್ಕಿಂಡಿ ಮತ್ತು ಕಿರಣ್ ಗೊಡ್ಕಿಂಡಿ ಅವರ ಸಂಗೀತ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸಿತು.

ನಂಜುಂಡ ಸ್ವಾಮಿಗಳು ಮೂಲತ ಸಂಗೀತ ಹಿನ್ನಲೆಯುಳ್ಳ ಕುಟುಂಬದಿಂದ ಬಂದವರು. ಹಾಗಾಗಿ ಅವರು ರಚಿಸಿದ ಎಲ್ಲ ಕ್ಯಾರಿಕೇಚರ್ ಗಳೂ ಪರಿಪೂರ್ಣತೆ ಪಡೆದಿವೆ ಎಂದರೆ ತಪ್ಪಾಗಲಾರದು. ಸಂಗೀತ ಗಾರರ ಹಾವ ಭಾವ ಗಳನ್ನೆಲ್ಲ ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಸ್ವಾಮಿಗಳು ತಮ್ಮ ಕೈಚಳಕ ತೋರಿದ್ದಾರೆ. ಸಂಗೀತ ಕಲಾವಿದ ಹಾವ ಭಾವ ಗಳಿಂದ ನಮ್ಮನ್ನು ಹಠಾತ್ತನೆ ಗಂಧರ್ವ ಲೋಕಕ್ಕೆ ಸೆಳೆಯುವಾಗ ಅಲ್ಲೆಲ್ಲೋ ಅವರ ಸೀರೆಯ ಸೆರಗಿನ ಜರಿ ಹೊಳೆಯುವುದು.. ಶಲ್ಯದ ಚಿತ್ತಾರ ನಮ್ಮನ್ನು ಸೆಳೆಯುವುದು.. ಅವರು ನುಡಿಸುವ ವಾದ್ಯಗಳ ಕುಸುರಿ.. ಹೀಗೆ ಅತೀ ಸೂಕ್ಷ್ಮಾತಿ ಸೂಕ್ಷ್ಮ ವಿಸ್ಮಯಗಳನ್ನು ಸೆರೆಹಿಡಿದಿದ್ದಾರೆ.

ಆತುರದಲ್ಲಿ ಪ್ರಸಿದ್ದಿಗೆ ಬರಬೇಕೆನ್ನುವ ಈ “ವೈರಲ್” ಎನ್ನುವ ಕಾಲದಲ್ಲಿ.. ಯಾವುದೊ ಹೆಸರಾಂತ ಫಿಲಂ ಸ್ಟಾರ್ ನನ್ನೋ ಅಥವಾ ಪೊಲಿಟಿಷಿಯನ್ ನನ್ನೋ ಚಿತ್ರಿಸಿ ಪ್ರಸಿದ್ದಿ ಗಳಿಸಬಹುದಾಗಿದ್ದ ಸ್ವಾಮಿಗಳು, ಸಂಗೀತ ಲೋಕದ ಮಹಾನ್ ವ್ಯಕ್ತಿಗಳನ್ನು ತಮ್ಮ ಚಿತ್ರ ವಿಷಯವನ್ನಾಗಿಸಿ ಕೊಂಡು ಅತೀ ಅದ್ಭುತವಾಗಿ ಚಿತ್ರಿಸಿದ್ದು ಕಲಾಲೋಕಕ್ಕೆ ಅವರ ಮಹಾನ್ ಕೊಡುಗೆ ಎಂದರೆ ತಪ್ಪಾಗಲಿಕ್ಕಿಲ್ಲ.

ಅವರ ಮುಂದಿನ ಎಲ್ಲ ಯೋಜನೆಗಳೂ ಯಶಸ್ವಿಯಾಗಲಿ.

ಕಲಾಸಕ್ತರು, ವಿದ್ಯಾರ್ಥಿಗಳು, ಸಂಗೀತಪ್ರೇಮಿಗಳು ನೋಡಲೇ ಬೇಕಾದ ಈ ಪ್ರದರ್ಶನ ಜುಲೈ 10 ರವರೆಗೂ ಸಾರ್ವಜನಿಕರ ವೀಕ್ಷಣೆಗೆ ಬೆಳಿಗ್ಗೆ 10 ರಿಂದ ಸಂಜೆ 7 ರ ವರೆಗೆ ಲಭ್ಯವಿರುತ್ತದೆ.

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆ ವರ್ಲ್ಡ್ ಕಲ್ಚರ್, ಆರ್ಟ್ ಗ್ಯಾಲರಿ

ಬಸವನಗುಡಿ ಬೆಂಗಳೂರು

ನೀವು ಭೇಟಿ ಮಾಡಿದಾಗ ಹಾಗೆಯೆ ಕಲಾವಿದ ನಂಜುಂಡ ಸ್ವಾಮಿಗಳನ್ನು ಮಾತನಾಡಿಸುವುದನ್ನು ಮರೆಯಬೇಡಿ. ಅವರು ಒಳ್ಳೆಯ ಹಾಸ್ಯಪ್ರಜ್ಞೆ ಇರುವ ಮಾತುಗಾರರೂ ಕೂಡ.

ಚಿತ್ರಕೃಪೆ: ವೆಂಕಿ ಸರ್ & ನಂಜುಂಡಸ್ವಾಮಿ